ಸಿದ್ಧಾಂತ

ಸಿದ್ಧಾಂತ

    ಸಮೂಹಶಕ್ತಿ ಸಂಘಟನೆಯ ಬಗ್ಗೆ ಆಸಕ್ತಿ ತೋರಿಸಿರುವುದಕ್ಕಾಗಿ ತಮಗೆ ಧನ್ಯವಾದ ಮತ್ತು ಅಭಿನಂದನೆಗಳು. ಸಮೂಹಶಕ್ತಿಯ ಪ್ರೇರಣೆಯ ಹಿಂದಿರುವ ಉದ್ದೇಶ, ಮುಖ್ಯವಾಗಿ…ನಿಮ್ಮಲ್ಲಿನ ಚಿಂತನೆಗಳನ್ನು ಜಾಗೃತಗೊಳಿ, ರಾಜಕಾರಣವೂ ಸೇರಿದಂತೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತಂದು, ಆ ಮೂಲಕ ಉತ್ತಮ ಸಮಾಜ ಮತ್ತು ಬಲಿಷ್ಠ ದೇಶದ ನಿರ್ಮಾಣ ಮಾಡುವುದು. ಒಂದು ಹೊಸ ಅಭಿಯಾನ ಆರಂಭಿಸಲು ಹೊರಟಿರುವ ನಿಮ್ಮಲ್ಲಿ ಹಲವು ಅನುಮಾನಗಳಿರಬಹುದು, ಒಂದು ಹೋರಾಟ ಅಥವ ಸಮಾಜ ಸೇವೆಯನ್ನು ಏಕೆ ಮತ್ತು ಹೇಗೆ ಮಾಡುವುದು, ಯಾವ ಮಟ್ಟಿಗೆ ಅಥವ ಯಾವ ಹಂತಕ್ಕೆ ಮಾಡುವುದು? ಎಂಬ ಪ್ರಶ್ನೆಗಳಿರಬಹುದು. ಈ ಕೆಲಸ ನನ್ನಿಂದ ಆಗುತ್ತದೆಯೋ ಇಲ್ಲವೋ? ನಿಜವಾಗಲೂ ನನ್ನ ಸಾಮರ್ಥ್ಯ ಏನಿದೆ? ಎಷ್ಟರ ಮಟ್ಟಿಗಿದೆ? ಅನ್ನುವುದನ್ನು ಕಂಡುಕೊಳ್ಳಲು ನಾವು ನಿಮಗೆ ನೆರವಾಗುವ ಕೆಲಸ ಮಾಡುತ್ತೇವೆ.

    ನಿಮ್ಮ ಹೋರಾಟ ಅಥವ ಅಭಿಯಾನವನ್ನು ಆರಂಭಿಸಲು ನೀವು ಬೆಳೆಸಿಕೊಳ್ಳಬೇಕಾಗಿರುವ ಮಾತುಗಾರಿಕೆ, ನಿಮ್ಮ ಎದುರಿನಲ್ಲಿರುವವರನ್ನು ಒಪ್ಪಿಸಲು ಬೇಕಾದ ನೈಪುಣ್ಯತೆಯನ್ನೂ ನೀವು ಕಲಿತುಕೊಳ್ಳಬಹುದು. ಸರ್ಕಾರದ ವಿವಿಧ ಇಲಾಖೆಗಳು, ಅಲ್ಲಿನ ಅಧಿಕಾರಿಗಳು, ಪೊಲೀಸರು ಮತ್ತಿತರರ ಜೊತೆ, ಪರಿಣಾಮಕಾರಿಯಾಗಿ ಮಾತುಗಳನ್ನಾಡುವ ಮೂಲಕ,

    ನಿಮ್ಮನ್ನು ಮತ್ತು ನಿಮ್ಮ ಸುತ್ತಲಿನ ಜನರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಹೇಗೆ, ಇದಕ್ಕಾಗಿ ಇತರರ ಸಹಕಾರ ಪಡೆಯುವುದು ಹೇಗೆ ಅನ್ನುವುದನ್ನು ನೀವು ತಿಳಿದುಕೊಳ್ಳಬಹುದು. ನಿಮ್ಮಲ್ಲೇನಾದರೂ ಧೈರ್ಯದ ಕೊರತೆ ಇದ್ದರೆ, ಆತ್ಮವಿಶ್ವಾಸದ ಕೊರತೆ ಇದ್ದರೆ, ಅದನ್ನು ಹೋಗಲಾಡಿಸಿಕೊಂಡು, ಮುಂದಕ್ಕೆ ದೃಢವಾದ ಹೆಜ್ಜೆಗಳನ್ನು ಇಡುವುದು ಹೇಗೆ ಅನ್ನುವುದನ್ನು ನೀವು ಅರಿತುಕೊಳ್ಳಬಹುದು. ಆದರೆ, ಇದೆಲ್ಲವನ್ನೂ ಮಾಡುವ ಮೊದಲು, ಸಾಮಾಜಿಕ ರಂಗಕ್ಕೆ ಹೆಜ್ಜೆಯಿಡಲು ಹೊರಟಿರುವ ನಿಮ್ಮಲ್ಲಿ, ಪ್ರಾಮಾಣಿಕತೆ, ವಿಚಾರನಿಷ್ಠೆ ಮತ್ತು ಶಿಸ್ತು ಇರುವುದು ಅತ್ಯಗತ್ಯ. ಏಕೆಂದರೆ, ಇತರರಿಗೆ ಅಥವ ಸಮಾಜಕ್ಕೆ ಒಳ್ಳೆಯದನ್ನು ಮಾಡಲು, ಮೊದಲು ನೀವು ಒಳ್ಳೆಯವರಾಗಿರಬೇಕು, ನಿಮ್ಮಲ್ಲಿ ಒಳ್ಳೆಯತನ ಇರಬೇಕು. ಒಂದು ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿಯಲ್ಲಿ ಒಳ್ಳೆಯ ಗುಣಗಳಿದ್ದರೆ, ಆತ ಕೈಗೊಳ್ಳುವ ಕಾಮಗಾರಿಗಳು, ಯೋಜನೆಗಳೂ ಉತ್ತಮವಾಗಿ ಮೂಡಿ ಬರುತ್ತವೆ. ಆತನೇ ಭ್ರಷ್ಟರಾಗಿದ್ದರೆ, ಅವನು ಕೈಗೊಳ್ಳುವ ಕಾಮಗಾರಿಯೂ ಕಳಪೆ ಆಗುತ್ತದೆ ಅಲ್ಲವೇ? ಯಾವುದಾದರೂ ಒಂದು ಕೆಲಸವನ್ನು ನಿರ್ವಹಿಸಲು ಯಾರು ಸೂಕ್ತರಾಗುತ್ತಾರೆ ಅನ್ನುವುದನ್ನು, ನಾವು ಮೊದಲೇ ನಿರ್ಧರಿಸುವುದು ಒಳ್ಳೆಯದು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ, ಸಾಕಷ್ಟು ಪ್ರಯತ್ನಗಳ ನಂತರವೂ, ನಾವು ನಿರೀಕ್ಷಿತ ಗುರಿ ಅಥವ ಫಲಿತಾಂಶ ಪಡೆಯುವಲ್ಲಿ ವಿಫಲರಾಗಬಹುದು. ಕೆಲಸಕ್ಕೆ ತಕ್ಕ ವ್ಯಕ್ತಿ ಹುಡುಕುವುದು ಮೊದಲ ಸರಿಯಾದ ಕ್ರಮ. ಅಥವ ನೀವು ಕೈಗೊಳ್ಳಬೇಕಿರುವ ಕೆಲಸಕ್ಕೆ, ನೀವು ಆಯ್ಕೆ ಮಾಡಿರುವ ವ್ಯಕ್ತಿಯನ್ನು ಸಿದ್ಧಗೊಳಿಸಬೇಕು, ಇದಕ್ಕೆ ಅಗತ್ಯವಿರುವ ಕೌಶಲ್ಯಗಳನ್ನೂ ನೀವು ಬೆಳೆಸಿಕೊಳ್ಳಬೇಕು

    ಆದರೆ, ನಾವು ಯಾರಿಗೂ ಬಾಯಿಗೆ ತುತ್ತು ಮಾಡಿ ತಿನ್ನಿಸುವ ಕೆಲಸ ಮಾಡುವುದಿಲ್ಲ. ನೀವೇ ಸ್ವತಂತ್ರ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು, ಸ್ವಪ್ರೇರಣೆಯಿಂದ ನೀವೇ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಸಮಸ್ಯೆಗಳನ್ನು ಮತ್ತು ವಿಚಾರಗಳನ್ನು ನೀವೇ ಗುರುತಿಸಿ, ಅವನ್ನು ನಿಭಾಯಿಸಲು, ಪರಿಹಾರ ಮಾಡಲು ಇರುವ ದಾರಿಗಳನ್ನು ಹುಡುಕಬೇಕಾಗುತ್ತದೆ.

    ಸಮೂಹ ಶಕ್ತಿ ಸಂಘಟನೆ, ಸಂಪೂರ್ಣವಾಗಿ ಜನಹಿತವನ್ನೇ ತನ್ನ ಗುರಿಯಾಗಿ ಹೊಂದಿರುತ್ತದೆ. ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂಬ ದಾಸ ವಾಣಿಯಂತೆ, ನಾವು ಮನುಷ್ಯರಾಗಿ ಹುಟ್ಟಿರುವುದೇ ಬಹು ದೊಡ್ಡ ವಿಚಾರ, ಹೀಗಾಗಿ, ಮನುಷ್ಯರಾಗಿ ನಮ್ಮ ಬದುಕನ್ನು ಎತ್ತರಿಸಿಕೊಳ್ಳಬೇಕು. ನಾವು ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡರೆ, ಉತ್ತಮ ಜೀವನ ಶೈಲಿ ನಮ್ಮದಾಗುತ್ತದೆ, ನಮಗೆ ಉತ್ತಮ ಸಹವಾಸ ಸಿಗುತ್ತದೆ, ಉತ್ತಮ ಬದುಕು ನಮ್ಮದಾಗುತ್ತದೆ… ನಮ್ಮ ಒಟ್ಟಾರೆ ಬದುಕಿನ ಗುಣಮಟ್ಟದಲ್ಲಿ ಗಣನೀಯ ಏರಿಕೆ ಆಗುತ್ತದೆ. ಹೀಗಾಗಿ, ಸಾರ್ವಜನಿಕ ಕ್ಷೇತ್ರಕ್ಕೆ ಬರುವವರು, ಪರಿಶ್ರಮ ವಹಿಸಲು, ಟೀಕೆಗಳನ್ನು ಸ್ವೀಕರಿಸಲು ಸದಾ ಸಿದ್ಧರಾಗಿರಬೇಕು. ಸಾರ್ವಜನಿಕ ಜೀವನದಲ್ಲಿರುವವರು, ಸಮಯದ ಮಿತಿ ನಿಗದಿ ಮಾಡಿಕೊಂಡು, ಅಷ್ಟರ ಮಿತಿಯಲ್ಲೇ ಕೆಲಸ ಮಾಡುತ್ತೇನೆ ಎಂದರೆ, ಅದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ, ಅದರಿಂದ ಹೆಚ್ಚು ಲಾಭವಾಗುವುದಿಲ್ಲ. ಇದರ ಜೊತೆಗೆ ನಾವು ಚುರುಕು ತನದಿಂದ ಕೆಲಸ ಮಾಡಬೇಕು, ಹಾರ್ಡ್ ವರ್ಕ್ ಜೊತೆಗೆ Smart ವರ್ಕೂ ಆಗಬೇಕು, ಹಾಗೆ ಮಾಡಿದರೆ ಮಾತ್ರ, ನಮ್ಮ ಗುರಿ ಸಾಧಿಸಲು ಸಾಧ್ಯ.

    ನೀವುಗಳೆಲ್ಲರೂ ನಿಮಗೆ ಅಗತ್ಯವಾಗುವ ಪತ್ರ ವ್ಯವಹಾರಗಳನ್ನು ಮಾಡಲು, ದೂರು ದಾಖಲಿಸಲು, ಅರ್ಜಿ ಬರೆಯಲು ನಿಮ್ಮಿಂದಲೇ ಸಾಧ್ಯವಾಗಬೇಕು. ಅಂಥದ್ದಕ್ಕೆಲ್ಲಾ ಬೇರೆ ಯಾರನ್ನೋ ಆಶ್ರಯಿಸುವಂತಿರಬಾರದು. ನೀವುಗಳು ಕನಿಷ್ಟಪಕ್ಷ ದಿನಕ್ಕೆ ಒಂದು ಗಂಟೆಯಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಮತ್ತೊಬ್ಬರ ಬೆಳವಣಿಗೆಗೆ ಕೊಡುಗೆ ನೀಡುವಂಥ ಮನಸ್ಥಿತಿ ಬೆಳೆಸಿಕೊಳ್ಳಬೇಕು.

    ನಾವು ಸ್ವತಂತ್ರ ಚಿಂತನೆ, ವೈಚಾರಿಕತೆ, ಧೈರ್ಯ, ಪ್ರಾಮಾಣಿಕತೆ ಮತ್ತು ತಾಳ್ಮೆಯ ಗುಣವನ್ನು ಬೆಳೆಸಿಕೊಳ್ಳಬೇಕು. ನಾವೆಲ್ಲರೂ ವೃತ್ತಿಗೌರವ, ದೇಶಪ್ರೇಮ ಮತ್ತು ಜಾಗತಿಕ ದೃಷ್ಟಿಕೋನವನ್ನು ಇರಿಸಿಕೊಳ್ಳಬೇಕು. ಮೌಲ್ಯಗಳಲ್ಲಿ ನಂಬಿಕೆ ಇಡಬೇಕು ಮತ್ತು ಅನುಸರಿಸಬೇಕು. ಇದರ ಜೊತೆಗೆ, ನಾವು Balanced Secularism ಅಂದರೆ, ಸಮತೋಲನದ ಜಾತ್ಯತೀತ ಸಿದ್ಧಾಂತ ಬೆಳೆಸಿಕೊಳ್ಳಬೇಕು ಮತ್ತು ಪಾಲನೆ ಮಾಡಬೇಕು ಎಂಬ ಚಿಂತನೆ ಸಮೂಹ ಶಕ್ತಿಯದ್ದು.