Welcome To ಸಮೂಹ ಶಕ್ತಿಯ ಉದ್ದೇಶ
ಪ್ರೇರಣೆಗೆ...ಸಾಧನೆಗೆ...ಬದಲಾವಣೆಗೆ
ಆತ್ಮೀಯರೇ...
ಸಮೂಹ ಶಕ್ತಿ ಒಂದು ಸಾಮಾಜಿಕ ಮತ್ತು ರಾಜಕೀಯ ಸಂಘಟನೆ. ಸಾಮಾನ್ಯ ಜನರಲ್ಲಿನ ಚಿಂತನೆಗಳನ್ನು, 'ಸಮಾಜಕ್ಕೆ ನಾನೇನಾದರೂ ಮಾಡಬೇಕು' ಎಂಬ ಹಂಬಲವನ್ನು ಜಾಗೃತಗೊಳಿಸಿ ರಾಜಕಾರಣವೂ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತಂದು ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಸಮೂಹ ಶಕ್ತಿಯ ಉದ್ದೇಶ. ಜನಸಾಮಾನ್ಯರಲ್ಲಿನ ಪುಟ್ಟ ಪುಟ್ಟ ಯೋಚನೆ- ಯೋಜನೆಗಳನ್ನು ಕಾರ್ಯಗತಗೊಳಿಸುವುದು ಸಮೂಹ ಶಕ್ತಿಯ ಉದ್ದೇಶ.
ಪ್ರತಿ ವ್ಯಕ್ತಿಯಲ್ಲಿನ ಶಕ್ತಿಯನ್ನು ಸಮೂಹ ಶಕ್ತಿಯಾಗಿಸಿ ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಉದ್ದೇಶವನ್ನು ಸಮೂಹ ಶಕ್ತಿ ಹೊಂದಿದೆ. ಸಮಾನಮನಸ್ಕರನ್ನು ಒಂದೆಡೆ ತಂದು ಅಭಿವೃದ್ಧಿಯನ್ನು ಸಾಧ್ಯವಾಗಿಸುವುದೇ ಸಮೂಹ ಶಕ್ತಿಯ ಧ್ಯೇಯ. ಸಮೂಹ ಶಕ್ತಿ ಇರುವುದು ಸಂಘಟನೆ ಮತ್ತು ಹೋರಾಟಕ್ಕಾಗಿ ಮಾತ್ರವೇ ಅಲ್ಲ. ಸಮೂಹ ಶಕ್ತಿಯಲ್ಲಿ ಭಾಗಿಯಾಗುವ ಎಲ್ಲರನ್ನೂ ಜಾಗೃತಗೊಳಿಸಿ ಅವರಲ್ಲಿನ ಆತ್ಮಶಕ್ತಿಯನ್ನು ಉದ್ದೀಪನಗೊಳಿಸಿ ಅವರ ವ್ಯಕ್ತಿತ್ವ ಸಕಾರಾತ್ಮಕ ಸರ್ವತೋಮುಖ ಬೆಳವಣಿಗೆ ಹೊಂದಲು ಅವಕಾಶವಿದೆ. ಒಂದು ಹೋರಾಟ ಅಥವ ಅಭಿಯಾನ ಆರಂಭಿಸಲು ಬೆಳೆಸಿಕೊಳ್ಳಬೇಕಾಗಿರುವ ಮಾತುಗಾರಿಕೆ, ಎದುರಿನಲ್ಲಿರುವವರನ್ನು ಒಪ್ಪಿಸಲು ಬೇಕಿರುವ ನೈಪುಣ್ಯವನ್ನೂ ಸಮೂಹ ಶಕ್ತಿ ಮೂಲಕ ಕಲಿತುಕೊಳ್ಳಬಹುದು.
ಒಂದು ಹೋರಾಟ ಅಥವ ಸಮಾಜ ಸೇವೆಯನ್ನು ಏಕೆ ಮತ್ತು ಹೇಗೆ ಮಾಡುವುದು? ಯಾವ ಮಟ್ಟಿಗೆ ಅಥವ ಯಾವ ಹಂತದ ತನಕ ಮಾಡುವುದು? ಎಂಬೆಲ್ಲಾ ಪ್ರಶ್ನೆಗಳಿಗೆ ಸಮೂಹಶಕ್ತಿ ಸ್ಪಷ್ಟವಾಗಿ ಉತ್ತರ ನೀಡಿದೆ.
ಈ ಕೆಲಸ ನನ್ನಿಂದ ಆಗುತ್ತದೆಯೇ ಇಲ್ಲವೇ? ನಿಜವಾಗಲೂ ನನ್ನ ಸಾಮರ್ಥ್ಯ ಎಷ್ಟಿದೆ? ನನ್ನಂಥವನು ಇದನ್ನೆಲ್ಲಾ ಮಾಡಲು ಸಾಧ್ಯವೇ? ಸಾಮಾನ್ಯ ಜನರಲ್ಲಿ ಕಂಡು ಬರುವ ಇಂತಹ ಪ್ರಶ್ನೆಗಳಿಗೆ ಸಮೂಹಶಕ್ತಿಯಲ್ಲಿ ಉತ್ತರವಿದೆ.
ಯಾವುದೇ ಒಂದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿ ಮತ್ತು ಅವನ ಶಕ್ತಿಯನ್ನು ಆ ಸಂಘಟನೆ ಬಳಸಿಕೊಳ್ಳುತ್ತದೆ. ಆದರೆ, ಆ ವ್ಯಕ್ತಿಗೆ ವೈಯಕ್ತಿಕವಾಗಿ ಯಾವುದೇ ಲಾಭವಾಗುವುದಿಲ್ಲ, ಆತನಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ. ಆದರೆ, ಸಮೂಹಶಕ್ತಿ ಜೊತೆಗೆ ಸೇರಿಕೊಳ್ಳುವ ವ್ಯಕ್ತಿಗಳಿಗೆ, ಉತ್ತಮ ಮಾತುಗಾರಿಕೆ, ಉತ್ತಮ ನಡವಳಿಕೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಹೇಗೆ? ಎಂಬುದನ್ನು ಕಲಿಯುವ ಅವಕಾಶ ಒದಗಿಸಿಕೊಡಲಾಗುತ್ತದೆ.
ಕೌಶಲ್ಯಗಳನ್ನು ಉತ್ತಮ ಪಡಿಸಿಕೊಂಡು, ಚತುರತೆಯಿಂದ, ಸ್ವತಂತ್ರವಾಗಿ ಮುಂದುವರಿಯುವುದು ಹೇಗೆ ಎಂಬುದನ್ನು ಸಮೂಹಶಕ್ತಿ ತಿಳಿಸಿಕೊಡುತ್ತದೆ.
ಸಮೂಹಶಕ್ತಿ ಇರುವುದು ಸಂಘಟನೆ ಮತ್ತು ಹೋರಾಟಕ್ಕಾಗಿ ಮಾತ್ರವೇ ಅಲ್ಲ. ಸಮೂಹಶಕ್ತಿಯಲ್ಲಿ ಭಾಗವಹಿಸುವ ಎಲ್ಲರನ್ನೂ ಜಾಗೃತಗೊಳಿಸಿ, ಅವರಲ್ಲಿನ ಆತ್ಮಶಕ್ತಿಯನ್ನು ಉದ್ಧೀಪನಗೊಳಿಸಿ ಅವರ ವ್ಯಕ್ತಿತ್ವ ಸಕಾರಾತ್ಮಕವಾಗಿ ಬೆಳವಣಿಗೆ ಹೊಂದಲು ಅವಕಾಶ ಕಲ್ಪಿಸಿಕೊಡಲಾಗುವುದು.
ಒಂದು ಹೋರಾಟ ಅಥವ ಅಭಿಯಾನವನ್ನು ಆರಂಭಿಸಲು, ಬೆಳೆಸಿಕೊಳ್ಳಬೇಕಾಗಿರುವ ಮಾತುಗಾರಿಕೆ, ಎದುರಿನಲ್ಲಿರುವವರನ್ನು ಒಪ್ಪಿಸಲು ಬೇಕಿರುವ ನೈಪುಣ್ಯತೆಯನ್ನೂ ಸಮೂಹಶಕ್ತಿ ಮೂಲಕ ಕಲಿತುಕೊಳ್ಳಬಹುದು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಪೊಲೀಸರು, ಮತ್ತಿತರ ಅಧಿಕಾರಿಗಳ ಜೊತೆ ಪರಿಣಾಮಕಾರಿಯಾಗಿ ಮಾತನಾಡುವ ಮೂಲಕ, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಹೇಗೆ? ಇದಕ್ಕಾಗಿ ಇತರರ ಸಹಕಾರ ಪಡೆಯುವುದು ಹೇಗೆ? ಅನ್ನುವುದನ್ನೂ ಆಸಕ್ತರು ಸಮೂಹಶಕ್ತಿ ಮೂಲಕ ತಿಳಿದುಕೊಳ್ಳಬಹುದು.
ಸಮೂಹಶಕ್ತಿ ಜೊತೆ ಗುರುತಿಸಿಕೊಳ್ಳುವವರಲ್ಲಿ, ಧೈರ್ಯ ಮತ್ತು ಆತ್ಮವಿಶ್ವಾಸದ ಕೊರತೆ ಇದ್ದರೆ, ಅದನ್ನು ಹೋಗಲಾಡಿಸಿಕೊಂಡು, ಮುಂದಕ್ಕೆ ದೃಢವಾದ ಹೆಜ್ಜೆಗಳನ್ನು ಇಡುವುದು ಹೇಗೆ? ಅನ್ನುವುದನ್ನು ಅರಿತುಕೊಳ್ಳಬಹುದು.
ಆದರೆ, ಇದೆಲ್ಲವನ್ನೂ ಮಾಡುವ ಮೊದಲು, ಸಾಮಾಜಿಕ ರಂಗಕ್ಕೆ ಹೆಜ್ಜೆಯಿಡಲು ಹೊರಟಿರುವವರಲ್ಲಿ ಪ್ರಾಮಾಣಿಕತೆ, ವಿಚಾರನಿಷ್ಠೆ ಮತ್ತು ಶಿಸ್ತು ಅತ್ಯಗತ್ಯ. ಏಕೆಂದರೆ, ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಹೊರಟಿರುವವರು, ಮೊದಲು ತಾವು ಒಳ್ಳೆಯವರಾಗಿರಬೇಕು.
ಒಂದು ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿಯಲ್ಲಿ, ಒಳ್ಳೆಯ ಗುಣಗಳಿದ್ದರೆ, ಆತ ಕೈಗೊಳ್ಳುವ ಕಾಮಗಾರಿಗಳು ಉತ್ತಮವಾಗಿರುತ್ತವೆ. ಆತನೇ ಭ್ರಷ್ಟನಾಗಿದ್ದರೆ, ಅವನು ಕೈಗೊಳ್ಳುವ ಕಾಮಗಾರಿಯೂ ಕಳಪೆ ಆಗಿರುತ್ತದೆ.
ಯಾವುದಾದರೂ ಒಂದು ಕೆಲಸವನ್ನು ನಿರ್ವಹಿಸಲು ಯಾರು ಸೂಕ್ತರಾಗುತ್ತಾರೆ ಅನ್ನುವುದನ್ನು, ಮೊದಲೇ ನಿರ್ಧರಿಸುವುದು ಒಳ್ಳೆಯದು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ, ಸಾಕಷ್ಟು ಪ್ರಯತ್ನಗಳ ನಂತರವೂ, ನಿರೀಕ್ಷಿತ ಗುರಿ ಅಥವ ಫಲಿತಾಂಶ ಪಡೆಯುವಲ್ಲಿ ವಿಫಲರಾಗಬಹುದು.
ಕೆಲಸಕ್ಕೆ ತಕ್ಕ ವ್ಯಕ್ತಿ ಹುಡುಕುವುದು ಮೊದಲ ಸರಿಯಾದ ಕ್ರಮ. ಅಥವ ಕೈಗೊಳ್ಳಬೇಕಿರುವ ಕೆಲಸಕ್ಕೆ, ಆಯ್ಕೆ ಮಾಡಿರುವ ವ್ಯಕ್ತಿಯನ್ನು ಸಿದ್ಧಗೊಳಿಸಬೇಕು, ಇದಕ್ಕೆ ಅಗತ್ಯವಿರುವ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಬೇಕು.
ಆದರೆ, ಸಮೂಹಶಕ್ತಿ ಯಾರಿಗೂ ಬಾಯಿಗೆ ತುತ್ತು ಮಾಡಿ ತಿನ್ನಿಸುವ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರೇ ಸ್ವತಂತ್ರ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು, ಸ್ವಪ್ರೇರಣೆಯಿಂದ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು.
ಸಮಸ್ಯೆಗಳು ಮತ್ತು ವಿಚಾರಗಳನ್ನು ಗುರುತಿಸಿ, ಅವನ್ನು ನಿಭಾಯಿಸಲು, ಪರಿಹರಿಸಲು ಇರುವ ದಾರಿಗಳನ್ನು ಹುಡುಕಬೇಕು. ಸಮೂಹಶಕ್ತಿ ಸಂಘಟನೆ, ಸಂಪೂರ್ಣವಾಗಿ ಜನಹಿತವನ್ನೇ ತನ್ನ ಗುರಿಯಾಗಿ ಹೊಂದಿರುತ್ತದೆ.
‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂಬ ದಾಸವಾಣಿಯಂತೆ’, ಮನುಷ್ಯರಾಗಿ ಹುಟ್ಟಿರುವುದೇ ಬಹು ದೊಡ್ಡ ವಿಚಾರ, ಹೀಗಾಗಿ ಬದುಕನ್ನು ಎತ್ತರಿಸಿಕೊಳ್ಳಬೇಕು. ‘ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡರೆ, ಉತ್ತಮರ ಸಹವಾಸ ಸಿಗುತ್ತದೆ, ಜೀವನ ಶೈಲಿ ಉತ್ತಮವಾಗುತ್ತದೆ, ಒಟ್ಟಾರೆ ಬದುಕಿನ ಗುಣಮಟ್ಟದಲ್ಲಿ ಗಣನೀಯ ಏರಿಕೆ ಆಗುತ್ತದೆ’.
ಸಾರ್ವಜನಿಕ ಕ್ಷೇತ್ರಕ್ಕೆ ಬರುವ ಇಚ್ಛೆಯುಳ್ಳವರು, ಪರಿಶ್ರಮವಹಿಸಲು, ಟೀಕೆಗಳನ್ನು ಸ್ವೀಕರಿಸಲು, ಸದಾ ಸಿದ್ಧರಾಗಿರಬೇಕು. ಸಾರ್ವಜನಿಕ ಜೀವನದಲ್ಲಿರುವವರು, ಸಮಯದ ಮಿತಿ ನಿಗದಿ ಪಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದರೆ, ಅದು ಪರಿಣಾಮಕಾರಿಯಾಗುವುದಿಲ್ಲ, ಅದರಿಂದ ಹೆಚ್ಚು ಲಾಭವಾಗುವುದಿಲ್ಲ. ಇದರ ಜೊತೆಗೆ, ಚುರುಕುತನದಿಂದಲೂ ಕೆಲಸ ಮಾಡಬೇಕು, ಹಾರ್ಡ್ವರ್ಕ್ ಜೊತೆಗೆ ಸ್ಮಾರ್ಟ್ವರ್ಕ್ ಕೂಡ ಅತ್ಯಗತ್ಯ. ಹಾಗೆ ಮಾಡಿದರೆ ಮಾತ್ರ, ಗುರಿ ಸಾಧಿಸಲು ಸಾಧ್ಯ.
ಇಷ್ಟು ಮಾತ್ರವಲ್ಲ, ಯಾವುದೇ ರೀತಿಯ ಪತ್ರ ವ್ಯವಹಾರ ಮಾಡಲು, ದೂರು ದಾಖಲಿಸಲು, ಅರ್ಜಿ ಬರೆಯಲು ಕಲಿತಿರಬೇಕು. ಅಂಥದ್ದಕ್ಕೆಲ್ಲಾ ಬೇರೆ ಯಾರನ್ನೋ ಆಶ್ರಯಿಸುವಂತಿರಬಾರದು. ಕನಿಷ್ಟಪಕ್ಷ, ದಿನಕ್ಕೆ ಒಂದು ಗಂಟೆಯಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಜ್ಞಾನ ಹೆಚ್ಚಿಸಿಕೊಳ್ಳಬೇಕು. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಕೂಡ, ಮತ್ತೊಬ್ಬರ ಬೆಳವಣಿಗೆಗೆ ಕೊಡುಗೆ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.
ಗೌರವಯುತವಾಗಿ ಬದುಕಲು, ಜವಾಬ್ದಾರಿಯುತ ಸ್ವಾತಂತ್ರ್ಯ ಅನುಭವಿಸಲು, ನಾಗರಿಕರಾಗಿ ಹೊಂದಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದೇ ವೇಳೆ, ಸಮಾಜದ ಮತ್ತು ನೆರೆಹೊರೆಯಲ್ಲಿನ ಬೆಳವಣಿಗೆಗಳ ಬಗ್ಗೆ ಅರಿವು ಬೆಳೆಸಿಕೊಂಡು, ಸಬಲರಾಗಬೇಕು, ಧೈರ್ಯಶಾಲಿಗಳಾಗಬೇಕು.
ಇತರೆಯವರ ಅಸಂಬದ್ಧ ಅಥವ ಬುದ್ಧಿಗೇಡಿತನದ ವರ್ತನೆಗಳನ್ನು ಒಪ್ಪಬಾರದು. ವಿಚಾರಶೀಲರಾಗಿ, ತರ್ಕಬದ್ಧ ಚಿಂತನೆ ನಡೆಸುವಂಥವರಾಗಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ, ಸಾಮಾಜಿಕ ಚಟುವಟಿಕೆಗಳ ಮುಂದಾಳತ್ವ ವಹಿಸಬೇಕು. ನಡೆ ನುಡಿಗಳಲ್ಲಿ ರಚನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು.
ಇದೆಲ್ಲದರ ಜೊತೆಗೆ, ಬದುಕು ಮತ್ತು ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆ ಹಾಸುಹೊಕ್ಕಾಗಿರುವಂತೆ ನೋಡಿಕೊಳ್ಳಬೇಕು. ಸ್ವತಂತ್ರ ಚಿಂತನೆಯ ಜೊತೆಗೆ, ವಿಚಾರವಂತಿಕೆ, ತಾಳ್ಮೆ. ವೃತ್ತಿಗೌರವ, ದೇಶಪ್ರೇಮ ಮತ್ತು ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು.
ಜವಾಬ್ದಾರಿಯುತ ನಾಗರಿಕರಾಗಿ, ಮಾನವ ಘನತೆಯಿಂದ ಜೀವನ ನಡೆಸುವಂಥ ಪರಿಸರ ರೂಪಿಸಿಕೊಳ್ಳಬೇಕು. ನ್ಯಾಯಪರತೆ ಇರಬೇಕು ಮತ್ತು ನ್ಯಾಯದ ಆಗ್ರಹಕ್ಕಾಗಿ ಸದಾ ಕಂಕಣಬದ್ಧರಾಗಿರಬೇಕು.
ಮೌಲ್ಯಗಳಲ್ಲಿ ನಂಬಿಕೆ ಇಡಬೇಕು ಮತ್ತು ಅನುಸರಿಸಬೇಕು. ಇದರ ಜೊತೆಗೆ, ಸಮತೋಲನದ ಜಾತ್ಯತೀತ ನಿಲುವನ್ನು ಇರಿಸಿಕೊಂಡು, ಸಮಾಜಮುಖಿಯಾಗಿ, ಬಹುತ್ವವನ್ನು ಗೌರವಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಮತ್ತು ಪಾಲಿಸಬೇಕು ಎಂಬ ಚಿಂತನೆ ಸಮೂಹಶಕ್ತಿಯದ್ದು.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಶಕ್ತಿಯನ್ನು ಜಾಗೃತಗೊಳಿಸಿ, ಅದನ್ನು ಸಮೂಹಶಕ್ತಿಯಾಗಿ ಬೆಳೆಸುವ ಮೂಲಕ, ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದೇ ಪ್ರಮುಖ ಉದ್ದೇಶ.